ಶ್ರೀರಾಮೋದಂತಮ್
ಸಂ: ಡಾ| ಕೆ.ಎಮ್.ಭಟ್ ಪುಣಚ
ಶ್ರೀರಾಮೋದಂತಮ್ ಇದು ರಾಮಾಯಣದ ಒಂದು ಸಂಕ್ಷಿಪ್ತ ರೂಪ. ಉದಂತ ಎಂದರೆ ವೃತ್ತಾಂತ. ಶ್ರೀರಾಮನ ಕಥನವನ್ನು ಚಿಕ್ಕದಾಗಿ ಆಖ್ಯಾನ ಮಾಡುವ ಒಂದು ಪುಟ್ಟ ಕಾವ್ಯ ಇದು. ರಾಮಾಯಣವು ಮಹಾನ್ ಕಾವ್ಯವಾದರೂ ತುಂಬಾ ಸರಳವಾಗಿದ್ದು ಸುಲಭವಾಗಿ ಅರ್ಥವಾಗುವಂತಿದೆ. ಮಹಾಭಾರತವೇ ಮೊದಲಾದ ಕಾವ್ಯಗಳಂತೆ ಕಠಿಣವಲ್ಲ. ಶ್ರೀರಾಮೋದಂತ ಅದಕ್ಕಿಂತಲೂ ಸರಳವಾಗಿದೆ. ಬರೆದವರು ಯಾರೆಂಬುದು ನಿಖರವಾಗಿ ತಿಳಿದಿಲ್ಲ ಪರಮೇಶ್ವರಕವಿವಿರಚಿತವೆಂದು ಪ್ರಚಲಿತವಿದೆ. ಕವಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹಿಂದಿನ ಕಾಲದಲ್ಲಿ ಸಂಸ್ಕೃತಾಭ್ಯಾಸಿಗಳು ವರ್ಣಮಾಲೆ ಕಲಿತಕೂಡಲೇ ಶ್ರೀರಾಮೋದಂತಂ ಮತ್ತು ಅಮರಕೋಶವನ್ನು ಕಂಠಸ್ಥ ಮಾಡಿಕೊಳ್ಳುವುದು ರೂಢಿಯಾಗಿತ್ತು. ವಾಲ್ಮೀಕಿವಿರಚಿತ ಮೂಲ ಶ್ರೀಮದ್ವಾಲ್ಮೀಕಿರಾಮಾಯಣದಲ್ಲಿ ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಿವೆ. ಅದನ್ನು ಸಂಕ್ಷಿಪ್ತಗೊಳಿಸಿ ಸಂಗ್ರಹರೂಪವಾಗಿ ಕೇವಲ ಸುಮಾರು ಇನ್ನೂರು ಶ್ಲೋಕಗಳಲ್ಲಿ ಶ್ರೀರಾಮೋದಂತಮ್ ಎಂಬ ಚುಟುಕು ರಾಮಾಯಣ ಕಾವ್ಯವನ್ನು ರಚಿಸಲಾಗಿದೆ. ಈ ಸರಳ ಸುಂದರ ಕಾವ್ಯವನ್ನು ಯಥಾಮತಿ ಅರಗಿಸಿಕೊಂಡು ಶ್ರೀರಾಮನ ಕೃಪೆಗೆ ಪಾತ್ರರಾಗೋಣ.
॥ಶ್ರೀರಾಮೋದಂತಮ್॥
।ಅಥ ಬಾಲಕಾಂಡಃ।
ಶ್ರೀಪತಿಂ ಪ್ರಣಿಪತ್ಯಾಹಂ ಶ್ರೀವತ್ಸಾಂಕಿತವಕ್ಷಸಮ್। ಶ್ರೀರಾಮೋದಂತಮಾಖ್ಯಾಸ್ಯೇ ಶ್ರೀವಾಲ್ಮೀಕಿಪ್ರಕೀರ್ತಿತಮ್ ॥೧।೧॥
ಪದಚ್ಛೇದ:
ಶ್ರೀಪತಿಂ ಪ್ರಣಿಪತ್ಯ ಅಹಂ ಶ್ರೀವತ್ಸಾಂಕಿತವಕ್ಷಸಮ್। ಶ್ರೀರಾಮೋದಂತಮ್ ಆಖ್ಯಾಸ್ಯೇ ಶ್ರೀವಾಲ್ಮೀಕಿಪ್ರಕೀರ್ತಿತಮ್॥
ಅನ್ವಯ ಅರ್ಥ:
ಶ್ರೀವತ್ಸಾಂಕಿತವಕ್ಷಸಂ(ಎದೆಯಲ್ಲಿ ಶ್ರೀವತ್ಸಚಿಹ್ನೆಯನ್ತು ಹೊಂದಿರುವ)
ಶ್ರೀಪತಿಂ(ಲಕ್ಷ್ಮೀಪತಿಯನ್ನು)
ಪ್ರಣಿಪತ್ಯ(ನಮಸ್ಕರಿಸಿ)
ಶ್ರೀವಾಲ್ಮೀಕಿಪ್ರಕೀರ್ತಿತಂ(ಶ್ರೀವಾಲ್ಮೀಕಿ ಮಹರ್ಷಿಗಳಿಂದ ಕೀರ್ತಿಸಲ್ಪಟ್ಟ)
ಶ್ರೀರಾಮೋದಂತಂ(ಶ್ರೀರಾಮೋದಂತವನ್ನು)
ಅಹಂ(ನಾನು)
ಆಖ್ಯಾಸ್ಯೇ(ಹೇಳುತ್ತೇನೆ)
ಭಾವಾರ್ಥ:
ಎದೆಯಲ್ಲಿ ಶ್ರೀವತ್ಸಚಿಹ್ನೆಯನ್ತು ಹೊಂದಿರುವ ಲಕ್ಷ್ಮೀಪತಿಯನ್ನು ನಮಸ್ಕರಿಸಿ ಶ್ರೀವಾಲ್ಮೀಕಿ ಮಹರ್ಷಿಗಳಿಂದ ಕೀರ್ತಿಸಲ್ಪಟ್ಟ ಶ್ರೀರಾಮೋದಂತವನ್ನು ಹೇಳುತ್ತೇನೆ.
ಪುರಾ ವಿಶ್ರವಸಃ ಪುತ್ರೋ ರಾವಣೋ ನಾಮ ರಾಕ್ಷಸಃ। ಆಸೀದಸ್ಯಾನುಜೌ ಚಾಸ್ತಾಂ ಕುಂಭಕರ್ಣವಿಭೀಷಣೌ।।೧।೨।।
ಪದಚ್ಛೇದ: ಪುರಾ ವಿಶ್ರವಸಃ ಪುತ್ರಃ ರಾವಣಃ ನಾಮ ರಾಕ್ಷಸಃ। ಆಸೀತ್ ಅಸ್ಯ ಅನುಜೌ ಚ ಆಸ್ತಾಂ ಕುಂಭಕರ್ಣವಿಭೀಷಣೌ।
ಅನ್ವಯ:
ಪುರಾ(ಹಿಂದೆ)
ವಿಶ್ರವಸಃ(ವಿಶ್ರವಸುವಿನ)
ಪುತ್ರಃ(ಮಗನಾದ)
ರಾವಣಃ ನಾಮ(ರಾವಣನೆಂಬ)
ರಾಕ್ಷಸಃ ಆಸೀತ್(ರಾಕ್ಷಸನಿದ್ದನು)।
ಅಸ್ಯ(ಅವನಿಗೆ) ಕುಂಭಕರ್ಣವಿಭೀಷಣೌ(ಕುಂಭಕರ್ಣವಿಭೀಷಣರೆಂಬ)
ಅನುಜೌ ಚ(ತಮ್ಮಂದಿರೂ)
ಆಸ್ತಾಮ್(ಇದ್ದರು)।
ಭಾವಾರ್ಥ:
ವಿಶ್ರವಸ್ ಎಂಬ ಮುನಿಯ ಮಗನಾದ ರಾವಣ ಎಂಬ ರಾಕ್ಷಸನಿದ್ದನು. ಅವನಿಗೆ ಕುಂಭಕರ್ಣ ಮತ್ತು ವಿಭೀಷಣ ಎಂಬ ಇಬ್ಬರು ತಮ್ಮಂದಿರೂ ಇದ್ದರು.
ತೇ ತು ತೀವ್ರೇಣ ತಪಸಾ ಪ್ರತ್ಯಕ್ಷೀಕೃತ್ಯ ವೇಧಸಮ್। ವವ್ರಿರೇ ಚ ವರಾನಿಷ್ಟಾನಸ್ಮಾದಾಶ್ರಿತವತ್ಸಲಾತ್॥೧।೩॥
ಪದಚ್ಛೇದ:
ತೇ ತು ತೀವ್ರೇಣ ತಪಸಾ ಪ್ರತ್ಯಕ್ಷೀಕೃತ್ಯ ವೇಧಸಮ್ ವವ್ರಿರೇ ಚ ವರಾನ್ ಇಷ್ಟಾನ್ ಅಸ್ಮಾತ್ ಆಶ್ರಿತವತ್ಸಲಾತ್।
ಅನ್ವಯ ಅರ್ಥ:
ತೇ ತು (ಆ ಸಹೋದರರು) ತೀವ್ರೇಣ ತಪಸಾ (ಘೋರ ತಪಸ್ಸಿನಿಂದ ಮೂಲಕ) ವೇಧಸಂ (ಬ್ರಹ್ಮನನ್ನು) ಪ್ರತ್ಯಕ್ಷೀಕೃತ್ಯ (ಪ್ರತ್ಯಕ್ಷಗೊಳಿಸಿ) ಅಸ್ಮಾತ್ ಆಶ್ರಿತವತ್ಸಲಾತ್(ಆಶ್ರಿತರಲ್ಲಿ ಪ್ರೀತಿಯುಳ್ಳ ಆ ಬ್ರಹ್ಮನಿಂದ) ಇಷ್ಟಾನ್ ವರಾನ್(ಇಷ್ಟವಾದ ವರಗಳನ್ನು) ವವ್ರಿರೇ (ಬೇಡಿಕೊಂಡರು)
ಭಾವಾರ್ಥ:
ವಿಶ್ರವಸುವಿನ ಮಕ್ಕಳಾದ ಆ ಮೂವರೂ ಬ್ರಹ್ಮನನ್ನು ಕುರಿತು ಘೋರವಾದ ತಪಸ್ಸನ್ನಾಚರಿಸಿದರು. ಆ ಮೂಲಕ ಭಕ್ತವತ್ಸಲನಾದ ಆ ಬ್ರಹ್ಮನಿಂದ ತಮಗೆ ಬೇಕಾದ ವರಗಳನ್ನು ಪಡೆದರು.
ರಾವಣೋ ಮಾನುಷಾದನ್ಯೈರವಧ್ಯತ್ವಂ ತಥಾನುಜಃ। ನಿರ್ದೇವತ್ವೇಚ್ಛಯಾ ನಿದ್ರಾಂ ಕುಂಭಕರ್ಣೋಽವೃಣೀತ ಚ॥೧।೪॥
ಪದಚ್ಛೇದ:
ರಾವಣಃ ಮಾನುಷಾತ್ ಅನ್ಯೈಃ ಅವಧ್ಯತ್ವಂ ತಥಾ ಅನುಜಃ। ನಿರ್ದೇವತ್ವೇಚ್ಛಯಾ ನಿದ್ರಾಂ ಕುಂಭಕರ್ಣಃ ಅವೃಣೀತ ಚ॥
ಅನ್ವಯ ಅರ್ಥ:
ರಾವಣಃ(ರಾವಣನು) ಮಾನುಷಾತ್ ಅನ್ಯೈಃ (ಮಾನವರ ಹೊರತಾಗಿ ಬೇರೆಯವರಿಂದ) ಅವಧ್ಯತ್ವಂ (ಕೊಲ್ಲಲ್ಪಡದಿರುವುದನ್ನು) ಅವೃಣೀತ(ಬೇಡಿಕೊಂಡನು). ತಥಾ (ಹಾಗೂ) ಅನುಜಃ(ತಮ್ಮನಾದ) ಕುಂಭಕರ್ಣಃ(ಕುಂಭಕರ್ಣನು) ನಿರ್ದೇವತ್ವೇಚ್ಛಯಾ(ದೇವತೆಗಳಿಲ್ಲವಾಗಬೇಕೆಂಬ ಇಚ್ಛೆಯಿಂದ) ನಿದ್ರಾಂ (ನಿದ್ರೆಯನ್ನು) (ಅವೃಣೀತ)( ಬೇಡಿಕೊಂಡನು)
ಭಾವಾರ್ಥ:
ಜ್ಯೇಷ್ಟನಾದ ರಾವಣನು ಮಾನವರನ್ನು ಸುಲಭವಾಗಿ ಗೆಲ್ಲಬಲ್ಲೆ ಎಂದುಕೊಂಡು ಮಾನವರ ಹೊರತಾಗಿ ಅನ್ಯರಿಂದ ಮರಣ ಬರಬಾರದು ಎಂಬ ವರನನ್ನು ಕೇಳಿಕೊಂಡನು. ಎರಡನೆಯವನಾದ ಕುಂಭಕರ್ಣನು ದೇವತೆಗಳೇ ಇಲ್ಲವಾಗಬೇಕೆಂಬ ವರವನ್ನು ಬೇಡಿಕೊಳ್ಳುವ ಇಚ್ಛೆ ಇದ್ದರೂ ಭಗವಂತನ ಲೀಲೆಯಿಂದಾಗಿ ನಿರ್ದೇವತ್ವದ ಬದಲು ನಿದ್ರಾವಸ್ಥೆಯನ್ನು ವರವಾಗಿ ಪಡೆದುಕೊಂಡನು
ವಿಭೀಷಣೋ ವಿಷ್ಣುಭಕ್ತಿಂ ವವ್ರೇ ಸತ್ವಗುಣಾನ್ವಿತಃ।
ತೇಭ್ಯ ಏತಾನ್ವರಾನ್ದತ್ವಾ ತತ್ರೈವಾಂತರ್ದಧೇ ಪ್ರಭುಃ॥೧।೫॥
ಪದಚ್ಛೇದ:
ವಿಭೀಷಣಃ ವಿಷ್ಣುಭಕ್ತಿಂ ವವ್ರೇ ಸತ್ವಗುಣಾನ್ವಿತಃ ।
ತೇಭ್ಯಃ ಏತಾನ್ ವರಾನ್ ದತ್ವಾ ತತ್ರ ಏವ ಅಂತರ್ದಧೇ ಪ್ರಭುಃ॥
ಅನ್ವಯ ಅರ್ಥ:
ಸತ್ವಗುಣಾನ್ವಿತಃ (ಸತ್ವಗುಣ ಹೊಂದಿದ) ವಿಭೀಷಣಃ(ವಿಭೀಷಣನು) ವಿಷ್ಣುಭಕ್ತಿಂ (ವಿಷ್ಣುಭಕ್ತಿಯನ್ನು) ವವ್ರೇ (ವರವಾಗಿ ಕೇಳಿಕೊಂಡನು) ತೇಭ್ಯಃ (ಅವರಿಗೆ) ಏತಾನ್ ವರಾನ್(ಈ ವರಗಳನ್ನು) ದತ್ವಾ(ಕೊಟ್ಟು) ಪ್ರಭುಃ (ಬ್ರಹ್ಮ ದೇವನು) ತತ್ರ ಏವ (ಅಲ್ಲಿಯೇ) ಅಂತರ್ದಧೇ(ಅಂತರ್ಧಾನನಾದನು)
ಭಾವಾರ್ಥ:
ಹುಟ್ಟಿನಿಂದಲೇ ಪರಮಸಾತ್ವಿಕನಾದ ವಿಭೀಷಣನು ಮುಕ್ತಿದಾಯಕವಾದ ವಿಷ್ಣುಭಕ್ತಿಯನ್ನೇ ವರವಾಗಿ ಕೇಳಿಕೊಂಡನು. ಈ ರೀತಿಯಲ್ಲಿ ಅವರಿಗೆ ಆಯಾ ವರಗಳನ್ನು ಕೊಟ್ಟು ಪಿತಾಮಹ ಬ್ರಹ್ಮದೇವನು ಅಲ್ಲಿಯೇ ಅಂತರ್ಧಾನನಾದನು.
ರಾವಣಸ್ತು ತತೋ ಗತ್ವಾ ರಣೇ ಜಿತ್ವಾ ಧನಾಧಿಪಮ್।
ಲಂಕಾಪುರೀಂ ಪುಷ್ಪಕಂ ಚ ಹೃತ್ವಾ ತತ್ರಾವಸತ್ಸುಖಮ್॥೧।೬॥
ಪದಚ್ಛೇದ:
ರಾವಣಃ ತು ತತಃ ಗತ್ವಾ ರಣೇ ಜಿತ್ವಾ ಧನಾಧಿಪಮ್।
ಲಂಕಾಪುರೀಂ ಪುಷ್ಪಕಂ ಚ ಹೃತ್ವಾ ತತ್ರ ಅವಸತ್ ಸುಖಮ್॥
ಅನ್ವಯ ಅರ್ಥ:
(ಅನಂತರ) ರಾವಣಃ ತು(ರಾವಣನಾದರೋ) ಗತ್ವಾ (ಹೊರಟು) ಧನಾಧಿಪಂ(ಧನಾಧಿಪತಿಯನ್ನು) ರಣೇ (ಯುದ್ಧದಲ್ಲಿ) ಜಿತ್ವಾ (ಸೋಲಿಸಿ) ಲಂಕಾಪುರೀಂ (ಲಂಕಾನಗರವನ್ನೂ) ಚ (ಮತ್ತು) ಪುಷ್ಪಕಂ (ಪುಷ್ಪಕವಿಮಾನವನ್ನು) ಹೃತ್ವಾ (ಅಪಹರಿಸಿ) ತತ್ರ (ಅಲ್ಲಿ) ಸುಖಂ(ಸುಖವಾಗಿ) ಅವಸತ್(ವಾಸಿಸಿದನು)
ಭಾವಾರ್ಥ:
ಬ್ರಹ್ಮನಿತ್ತ ವರಬಲದಿಂದ ರಾವಣನು ಅಣ್ಣನೆಂದೂ ನೋಡದೆ ದಿಕ್ಪಾಲಕನೂ ಧನಾಧಿಪತಿಯೂ ಆದ ಕುಬೇರನೊಂದಿಗೇ ಹೋರಾಡಿ ಅವನನ್ನು ಸೋಲಿಸಿ ಅವನ ಪುಷ್ಪಕವಿಮಾನವನ್ನೂ ಲಂಕಾನಗರಿಯನ್ನೂ ವಶಪಡಿಸಿಕೊಂಡನು. ಅಲ್ಲಿಯೇ ತಮ್ಮಂದಿರೊಂದಿಗೆ ಸುಖವಾಗಿ ವಾಸಿಸಿದನು.
ಯಾತುಧಾನಾಸ್ತತಃ ಸರ್ವೇ ರಸಾತಲನಿವಾಸಿನಃ।
ದಶಾನನಂ ಸಮಾಶ್ರಿತ್ಯ ಲಂಕಾಯಾಂ ಸುಖಮಾವಸನ್॥೧।೭॥
ಪದಚ್ಛೇದ:
ಯಾತುಧಾನಾಃ ತತಃ ಸರ್ವೇ ರಸಾತಲನಿವಾಸಿನಃ ದಶಾನನಂ ಸಮಾಶ್ರಿತ್ಯ ಲಂಕಾಯಾಂ ಸುಖಂ ಆವಸನ್॥
ಅನ್ವಯ ಅರ್ಥ:
ತತಃ (ಆಗ) ರಸಾತಲವಾಸಿನಃ(ರಸಾತಲದಲ್ಲಿ ವಾಸಿಸುವ) ಸರ್ವೇ(ಎಲ್ಲಾ) ಯಾತುಧಾನಾಃ (ಯಾತನೆಯನ್ನೀವ ರಾಕ್ಷಸರು) ದಶಾನನಂ (ರಾವಣನನ್ನು) ಸಮಾಶ್ರಿತ್ಯ(ಆಶ್ರಯಿಸಿ) ಲಂಕಾಯಾಂ (ಲಂಕೆಯಲ್ಲಿ) ಸುಖಂ (ಸುಖವಾಗಿ) ಆವಸನ್(ವಾಸಿಸಿದರು)
ಭಾವಾರ್ಥ:
ರಾಕ್ಷಸನೊಬ್ಬ ಲಂಕಾಧಿಪತಿಯಾದೊಡನೇ ಯಾತನೆಯನ್ನು ಕೊಡುವ ರಸಾತಲದ ರಾಕ್ಷಸರೆಲ್ಲರೂ ಲಂಕೆಗಾಗಮಿಸಿ ರಾವಣನನ್ನು ಕೂಡಿಕೊಂಡರು. ಅವನನ್ನು ಆಶ್ರಯಿಸಿ ಅಲ್ಲಿಯೇ ಸುಖವಾಗಿ ವಾಸಿಸಿದರು.
ಮಂಡೋದರೀಂ ಮಯಸುತಾಂ ಪರಿಣೀಯ ದಶಾನನಃ।
ತಸ್ಯಾಂ ಲೇಭೇ ಮಹಾವೀರಂ ಮೇಘನಾದಾಹ್ವಯಂ ಸುತಮ್॥೧।೮॥
ಪದಚ್ಛೇದ:
ಮಂಡೋದರೀಂ ಮಯಸುತಾಂ ಪರಿಣೀಯ ದಶಾನನಃ ತಸ್ಯಾಂ ಲೇಭೇ ಮಹಾವೀರಂ ಮೇಘನಾದಾಹ್ವಯಂ ಸುತಮ್॥
ಅನ್ವಯ ಅರ್ಥ:
ದಶಾನನಃ(ರಾವಣನು) ಮಯಸುತಾಂ (ಮಯಾಸುರನ ಮಗಳಾದ) ಮಂಡೋದರೀಂ(ಮಂಡೋದರಿಯನ್ನು) ಪರಿಣೀಯ (ವಿವಾಹವಾಗಿ) ತಸ್ಯಾಂ (ಅವಳಲ್ಲಿ) ಮೇಘನಾದಾಹ್ವಯಂ(ಮೇಘನಾದನೆಂಬ) ಮಹಾವೀರಂ(ಮಹಾವೀರನಾದ) ಸುತಂ(ಮಗನನ್ನು) ಲೇಭೇ (ಪಡೆದನು).
ಭಾವಾರ್ಥ:
ನಂತರದಲ್ಲಿ ದಶಮುಖನಾದ ರಾವಣನು ಮಯಾಸುರನಿಂದ ಹೇಮೆಯೆಂಬ ಅಪ್ಸರೆಯಲ್ಲಿ ಜನಿಸಿದ ಮಂಡೋದರಿಯನ್ನು ವಿವಾಹವಾದನು. ಅವಳಲ್ಲಿ ಜನಿಸಿದ ಶಿಶುವು ಹುಟ್ಟಿದ ಕೂಡಲೇ ಮೇಘದಂತೆ ಧ್ವನಿ ಮಾಡಿದ್ದರಿಂದ ಅವನಿಗೆ ಮೇಘನಾದನೆಂಬ ಹೆಸರಾಯಿತು.
ರಸಾಂ ರಸಾತಲಂ ಚೈವ ವಿಜಿತ್ಯ ಸ ತು ರಾವಣಃ। ಲೋಕಾನಾಕ್ರಾಮಯನ್ಸರ್ವಾಞ್ಜಹಾರ ಚ ವಿಲಾಸಿನೀಃ॥೧।೯॥
ಪದಚ್ಛೇದ:
ರಸಾಂ ರಸಾತಲಂ ಚ ಏವ ವಿಜಿತ್ಯ ಸಃ ತು ರಾವಣಃ । ಲೋಕಾನ್ ಆಕ್ರಾಮಯನ್ ಸರ್ವಾನ್ ಜಹಾರ ಚ ವಿಲಾಸಿನೀಃ॥
ಅನ್ವಯ ಅರ್ಥ:
ಸಃ ತು ರಾವಣಃ (ಆ ರಾವಣನಾದರೋ) ರಸಾಂ (ಭೂಲೋಕವನ್ನೂ) ರಸಾತಲಂ ಚ ಏವ(ರಸಾತಲವನ್ನೂ) ವಿಜಿತ್ಯ (ಗೆದ್ದು) ಸರ್ವಾನ್ ಲೋಕಾನ್(ಎಲ್ಲಾ ಲೋಕಗಳನ್ನೂ) ಆಕ್ರಾಮಯನ್(ಆಕ್ರಮಿಸುತ್ತಾ) ವಿಲಾಸಿನೀಃ(ನಾರಿಯರನ್ನು) ಜಹಾರ(ಅಪಹರಿಸಿದನು)
ಭಾವಾರ್ಥ:
ರಾಕ್ಷಸರೆಲ್ಲರ ಬೆಂಬಲದಿಂದಲೂ ವರಬಲದಿಂದಲೂ ಸ್ವಸಾಮರ್ಥ್ಯದಿಂದಲೂ ಬಲಿಷ್ಠನಾದ ಆ ರಾವಣನು ಭೂಮಿಯಿಂದ ಪಾತಾಳದ ವರೆಗೆ ಎಲ್ಲಾ ಲೋಕಗಳನ್ನೂ ಗೆದ್ದುಕೊಂಡನು. ಸಾಲದೆಂಬಂತೆ ಉಳಿದೆಲ್ಲಾ ಲೋಕಗಳನ್ನೂ ಆಕ್ರಮಿಸಿಕೊಂಡನು. ಸಿಕ್ಕಿದ ನಾರಿಯರನ್ನೆಲ್ಲಾ ಅಪಹರಿಸಿದನು.
ದೂಷಯನ್ವೈದಿಕಂ ಕರ್ಮ ದ್ವಿಜಾನರ್ದಯತಿ ಸ್ಮ ಸಃ। ಆತ್ಮಜೇನಾನ್ವಿತೋ ಯುದ್ಧೇ ವಾಸವಂ ಚಾಪ್ಯಪೀಡಯತ್॥೧।೧೦॥
ಪದಚ್ಛೇದ:
ದೂಷಯನ್ ವೈದಿಕಂ ಕರ್ಮ ದ್ವಿಜಾನ್ ಅರ್ದಯತಿ ಸ್ಮ ಸಃ। ಆತ್ಮಜೇನ ಅನ್ವಿತಃ ಯುದ್ಧೇ ವಾಸವಂ ಚ ಅಪಿ ಅಪೀಡಯತ್॥
ಅನ್ವಯ ಅರ್ಥ:
ಸಃ(ಅವನು) ವೈದಿಕಂ ಕರ್ಮ (ವೇದೋಕ್ತವಾದ ಕರ್ಮಗಳನ್ನು) ದೂಷಯನ್ (ಹಳಿಯುತ್ತಾ) ದ್ವಿಜಾನ್ (ವಿಪ್ರರನ್ನು) ಅರ್ದಯತಿ ಸ್ಮ (ಪೀಡಿಸುತ್ತಿದ್ದನು) ಆತ್ಮಜೇನ ಅನ್ವಿತಃ(ಮಗನನ್ನು ಕೂಡಿಕೊಂಡು) ವಾಸವಂ ಚ ಅಪಿ (ಇಂದ್ರನನ್ನೂ) ಅಪೀಡಯತ್ (ಪೀಡಿಸಿದನು).
ಭಾವಾರ್ಥ:
ಎಲ್ಲಾ ಲೋಕಗಳನ್ನೂ ಗೆದ್ದುಕೊಂಡ ರಾವಣನು ಲೋಕಪಾಲನೆ ಮಾಡುವ ಬದಲು ಲೋಕಪೀಡನೆಗೆ ತೊಡಗಿದನು. ವೈದಿಕ ಕರ್ಮಗಳನ್ನು ಅಲ್ಲಗಳೆಯುತ್ತಾ ಹಳಿಯತೊಡಗಿದನು. ವೇದಜ್ಞರಾದ ಬ್ರಾಹ್ಮಣರನ್ನು ಹಿಂಸಿಸಿದನು. ಮಗನಾದ ಮೇಘನಾದನೊಂದಿಗೆ ಸೇರಿ ಇಂದ್ರನನ್ನೂ ಪೀಡಿಸಿದನು. ಇಂದ್ರನನ್ನು ಗೆದ್ದುದರಿಂದ ಮೇಘನಾದನಿಗೆ ಇಂದ್ರಜಿತ್ ಎಂಬ ಹೆಸರೇ ಪ್ರಸಿದ್ಧವಾಯಿತು.
ತದೀಯತರುರತ್ನಾನಿ ಪುನರಾನಾಯ್ಯ ಕಿಂಕರೈಃ।
ಸ್ಥಾಪಯಿತ್ವಾ ತು ಲಂಕಾಯಾಮವಸಚ್ಚ ಚಿರಾಯ ಸಃ ॥೧।೧೧॥
ಪದಚ್ಛೇದ:
ತದೀಯತರುರತ್ನಾನಿ ಪುನಃ ಆನಾಯ್ಯ ಕಿಂಕರೈಃ।
ಸ್ಥಾಪಯಿತ್ವಾ ತು ಲಂಕಾಯಾಮ್ ಅವಸತ್ ಚ ಚಿರಾಯ ಸಃ॥
ಅನ್ವಯ ಅರ್ಥ:
ಸಃ(ಅವನು/ರಾವಣನು) ಪುನಃ(ಮತ್ತೆ) ತದೀಯತರುರತ್ನಾನಿ (ಅವನ/ಇಂದ್ರನ ಕಲ್ಪತರು ಚಿಂತಾಮಣಿ ಮೊದಲಾದವುಗಳನ್ನು) ಕಿಂಕರೈಃ(ಸೇವಕರಿಂದ) ಆನಾಯ್ಯ(ತರಿಸಿ) ಚ (ಮತ್ತು) ಲಂಕಾಯಾಂ (ಲಂಕೆಯಲ್ಲಿ) ಸ್ಥಾಪಯಿತ್ವಾ (ಸ್ಥಾಪಿಸಿ) ಚಿರಾಯ (ದೀರ್ಘಕಾಲ) ಅವಸತ್ (ಬಾಳಿದನು)
ಭಾವಾರ್ಥ:
ತನ್ನ ಸೇವಕರ ಮೂಲಕ ಸ್ವರ್ಗದಲ್ಲಿರುವ ಕಲ್ಪತರು ಚಿಂತಾಮಣಿಯೇ ಮೊದಲಾದ ಅನರ್ಘ್ಯ ವಸ್ತುಗಳನ್ನು ಬಲಾತ್ಕರವಾಗಿ ತರಿಸಿ ಲಂಕೆಯಲ್ಲಿರಿಸಿಕೊಂಡನು. ಅವುಗಳ ಪ್ರಭಾವದಿಂದ ಲಂಕೆಯಲ್ಲಿ ದೀರ್ಘ ಕಾಲದ ವರೆಗೆ ಸುಖವಾಗಿ ಬಾಳಿದನು.
ತತಸ್ಮಿನ್ನವಸರೇ ವಿಧಾತಾರಂ ದಿವೌಕಸಃ।
ಉಪಗಮ್ಯೋಚಿರೇ ಸರ್ವಂ ರಾವಣಸ್ಯ ವಿಚೇಷ್ಟಿತಮ್॥೧।೧೨॥
ಪದಚ್ಛೇದ:
ತತಃ ತಸ್ಮಿನ್ ಅವಸರೇ ವಿಧಾತಾರಂ ದಿವೌಕಸಃ। ಉಪಗಮ್ಯ ಊಚಿರೇ ಸರ್ವಂ ರಾವಣಸ್ಯ ವಿಚೇಷ್ಟಿತಮ್॥
ಅನ್ವಯ ಅರ್ಥ:
ತತಃ(ನಂತರ) ತಸ್ಮಿನ್ ಅವಸರೇ (ಆ ಸಮಯದಲ್ಲಿ) ದಿವೌಕಸಃ(ದೇವತೆಗಳು) ವಿಧಾತಾರಂ(ಬ್ರಹ್ಮದೇವನನ್ನು) ಉಪಗಮ್ಯ(ಬಳಿಸಾರಿ) ರಾವಣಸ್ಯ(ರಾವಣನ) ಸರ್ವಂ(ಎಲ್ಲಾ) ವಿಚೇಷ್ಟಿತಮ್(ಕುಚೇಷ್ಟೆಗಳನ್ನು) ಊಚಿರೇ(ಹೇಳಿದರು).
ಭಾವಾರ್ಥ:
ರಾವಣನ ದೌರ್ಜನ್ಯವನ್ನು ಸಹಿಸಲಾರದೆ ದೇವತೆಗಳೆಲ್ಲರೂ ಪಿತಾಮಹ ಬ್ರಹ್ಮದೇವನ ಬಳಿಸಾರಿ ರಾವಣನ ಕುಚೇಷ್ಟೆಗಳನ್ನೆಲ್ಲ ಸಂಪೂರ್ಣವಾಗಿ ಅರುಹಿದರು
ತದಾಕರ್ಣ್ಯ ಸುರೈಃ ಸಾಕಂ ಪ್ರಾಪ್ಯ ದುಗ್ಧೋದಧೇಸ್ತಟಮ್।
ತುಷ್ಟಾವ ಚ ಹೃಷೀಕೇಶಂ ವಿಧಾತಾ ವಿವಿಧೈಃ ಸ್ತವೈಃ॥೧।೧೩॥
ಪದಚ್ಛೇದ:
ತತ್ ಆಕರ್ಣ್ಯ ಸುರೈಃ ಸಾಕಂ ಪ್ರಾಪ್ಯ ದುಗ್ದೋದಧೇಃ ತಟಮ್ ತುಷ್ಟಾವ ಚ ಹೃಷೀಕೇಶಂ ವಿಧಾತಾ ವಿವಿಧೈಃ ಸ್ತವೈಃ॥
ಅನ್ವಯ ಅರ್ಥ:
ತತ್ (ಅದನ್ನು) ಆಕರ್ಣ್ಯ(ಕೇಳಿ) ವಿಧಾತಾ (ಬ್ರಹ್ಮದೇವನು) ಸುರೈಃ ಸಾಕಂ(ದೇವತೆಗಳೊಂದಿಗೆ) ದುಗ್ಧೋದಧೇಃ(ಕ್ಷೀರಸಾಗರದ) ತಟಂ (ದಡವನ್ನು) ಪ್ರಾಪ್ಯ (ಸೇರಿ) ವಿವಿಧೈಃ (ವಿಧವಿಧವಾದ) ಸ್ತವೈಃ (ಸ್ತೋತ್ರಗಳಿಂದ) ಹೃಷೀಕೇಶಂ (ನಾರಾಯಣನನ್ನು) ತುಷ್ಟಾವ (ಸಂತೋಷಗೊಳಿಸಿದನು)
ಭಾವಾರ್ಥ:
ದೇವತೆಗಳ ಮಾತನ್ನು ಕೇಳಿ ಕರಗಿದ ಬ್ರಹ್ಮದೇವನು ಆ ದೇವತೆಗಳೊಂದಿಗೆ ಕ್ಷೀರಸಾಗರದ ಕಡೆಗೆ ಸಾಗಿದನು. ವಿಧವಿಧವಾದ ಸ್ತೋತ್ರಗಳಿಂದ ಮಹಾವಿಷ್ಣುವನ್ನು ಸ್ತುತಿಸಿ ಸಂತೋಷಗೊಳಿಸಿದನು.
ಆವಿರ್ಭೂಯಾಥ ದೈತ್ಯಾರಿಃ ಪಪ್ರಚ್ಛ ಚ ಪಿತಾಮಹಮ್। ಕಿಮರ್ಥಮಾಗತೋಽಸಿ ತ್ವಂ ಸಾಕಂ ದೇವಗಣೈರಿತಿ॥೧।೧೪॥
ಪದಚ್ಛೇದ:
ಆವಿರ್ಭೂಯ ಅಥ ದೈತ್ಯಾರಿಃ ಪಪ್ರಚ್ಛ ಚ ಪಿತಾಮಹಮ್: ಕಿಮರ್ಥಂ ಆಗತಃ ಅಸಿ ತ್ವಂ ಸಾಕಂ ದೇವಗಣೈಃ ಇತಿ॥
ಅನ್ವಯ ಅರ್ಥ:
ಅಥ(ಆಗ) ದೈತ್ಯಾರಿಃ(ದೈತ್ಯಶತ್ರುವು) ಆವಿರ್ಭೂಯ(ಪ್ರತ್ಯಕ್ಷನಾಗಿ) ಪಿತಾಮಹಂ(ಬ್ರಹ್ಮದೇವನನ್ನು) ಪಪ್ರಚ್ಛ(ಕೇಳಿದನು) ಕಿಮರ್ಥಂ(ಯಾವ ಕಾರಣಕ್ಕೆ) ತ್ವಂ(ನೀನು) ದೇವಗಣೈಃ ಸಾಕಂ(ದೇವಗಣದೊಂದಿಗೆ) ಆಗತಃ ಅಸಿ(ಬಂದಿರುವೆ)
ಭಾವಾರ್ಥ:
ವಿಧಾತನ ಸ್ತುತಿಯಿಂದ ಸಂತೋಷಗೊಂಡ ದೈತ್ಯಸೂದನನಾದ ಮಹಾವಿಷ್ಣುವು ಪ್ರತ್ಯಕ್ಷನಾಗಿ ಕೇಳಿದನು:
ಬ್ರಹ್ಮದೇವ ಯಾವ ಕಾರಣಕ್ಕಾಗಿ ದೇವಗಣದೊಂದಿಗೆ ಬಂದಿರುವೆ?
ತತೋ ದಶಾನನಾತ್ಪೀಡಾಮಜಸ್ತಸ್ಮೈ ನ್ಯವೇದಯತ್। ತಚ್ಚ್ಛ್ರುತ್ವೋವಾಚ ಧಾತಾರಂ ಹರ್ಷಯನ್ವಿಷ್ಟರಶ್ರವಾಃ॥೧।೧೫॥
ಪದಚ್ಛೇದ:
ತತಃ ದಶಾನನಾತ್ ಪೀಡಾಂ ಅಜಃ ತಸ್ಮೈ ನ್ಯವೇದಯತ್ ತತ್ ಶ್ರುತ್ವಾ ಉವಾಚ ಧಾತಾರಂ ಹರ್ಷಯನ್ ವಿಷ್ಟರಶ್ರವಾಃ॥
ಅನ್ವಯ ಅರ್ಥ:
ತತಃ (ಆಗ) ಅಜಃ (ಬ್ರಹ್ಮದೇವನು) ತಸ್ಮೈ (ಅವನಿಗೆ) ದಶಾನನಾತ್ ಪೀಡಾಂ (ರಾವಣನಿಂದಾಗಿರುವ ತೊಂದರೆಯನ್ನು) ನ್ಯವೇದಯತ್ (ನಿವೇದಿಸಿಕೊಂಡನು) ತತ್ ಶ್ರುತ್ವಾ (ಅದನ್ನು ಕೇಳಿ) ವಿಷ್ಟರಶ್ರವಾಃ(ಮಹಾವಿಷ್ಣುವು) ಧಾತಾರಂ (ಬ್ರಹ್ಮದೇವನನ್ನು) ಹರ್ಷಯನ್ (ಸಂತೋಷಗೊಳಿಸುತ್ತಾ) ಉವಾಚ(ಹೇಳಿದನು)
ಭಾವಾರ್ಥ:
ಆಗ ಬ್ರಹ್ಮದೇವನು ದುಷ್ಟನಾದ ರಾವಣನಿಂದ ಲೋಕಕ್ಕೆ ಆಗುತ್ತಿರುವ ತೊಂದರೆಗಳನ್ನು ವಿಷ್ಣುವಿನಲ್ಲಿ ನಿವೇದಿಸಿಕೊಂಡನು. ಅದನ್ನು ಕೇಳಿಸಿಕೊಂಡ ವಿಷ್ಣುವು ಆತನನ್ನು ಸಂತೈಸುತ್ತಾ ಹೀಗೆಂದನು.
ಅಲಂ ಭಯೇನಾತ್ಮಯೋನೇ ಗಚ್ಛ ದೇವಗಣೈಃ ಸಹ।
ಅಹಂ ದಾಶರಥಿರ್ಭೂತ್ವಾ ಹನಿಷ್ಯಾಮಿ ದಶಾನನಮ್॥೧।೧೬॥
ಪದಚ್ಛೇದ:
ಅಲಂ ಭಯೇನ ಆತ್ಮಯೋನೇ ಗಚ್ಛ ದೇವಗಣೈಃ ಸಹ । ಅಹಂ ದಾಶರಥಿಃ ಭೂತ್ವಾ ಹನಿಷ್ಯಾಮಿ ದಶಾನನಮ್॥
ಅನ್ವಯ ಅರ್ಥ:
ಆತ್ಮಯೋನೇ!( ಸ್ವಯಂಜಾತನಾದ ಬ್ರಹ್ಮನೇ) ಭಯೇನ ಅಲಮ್ (ಭಯ ಸಾಕು) ದೇವಗಣೈಃ ಸಹ (ದೇವಗಣದೊಂದಿಗೆ) ಗಚ್ಛ (ಹೋಗು) ಅಹಂ (ನಾನು) ದಾಶರಥಿಃ ಭೂತ್ವಾ (ದಶರಥಪುತ್ರನಾಗಿ) ದಶಾನನಂ(ರಾವಣನನ್ನು) ಹನಿಷ್ಯಾಮಿ (ಕೊಲ್ಲುತ್ತೇನೆ)
ಭಾವಾರ್ಥ:
ಸ್ವಯಂಜಾತನಾದ ಬ್ರಹ್ಮನೇ! ಭಯವಿನ್ನು ಸಾಕು ಧೈರ್ಯದಿಂದಿರಿ. ನಾನು ದಶರಥನಿಗೆ ಪುತ್ರನಾಗಿ ಜನಿಸಿ ರಾವಣನನ್ನು ಸಂಹಾರಮಾಡುವೆನು.
ಆತ್ಮಾಂಶೈಶ್ಚ ಸುರಾಃ ಸರ್ವೇ ಭೂಮೌ ವಾನರರೂಪಿಣಃ। ಜಾಯೇರನ್ಮಮ ಸಾಹಾಯ್ಯಂ ಕರ್ತುಂ ರಾವಣನಿಗ್ರಹೇ॥೧।೧೭॥
ಪದಚ್ಛೇದ:
ಆತ್ಮಾಂಶೈಃ ಚ ಸುರಾಃ ಸರ್ವೇ ಭೂಮೌ ವಾನರರೂಪಿಣಃ। ಜಾಯೇರನ್ ಮಮ ಸಾಹಾಯ್ಯಂ ಕರ್ತುಂ ರಾವಣನಿಗ್ರಹೇ ॥
ಅನ್ವಯ ಅರ್ಥ:
ರಾವಣನಿಗ್ರಹೇ(ರಾವಣಸಂಹಾರದಲ್ಲಿ) ಮಮ(ನನಗೆ) ಸಾಹಾಯ್ಯಂ ಕರ್ತುಂ(ಸಹಾಯಮಾಡಲು) ಸರ್ವೇ ಚ ಸುರಾಃ(ಎಲ್ಲಾ ದೇವತೆಗಳೂ) ಆತ್ಮಾಂಶೈಃ(ತಮ್ಮ ಅಂಶದಿಂದ) ವಾನರರೂಪಿಣ(ಭೂತ್ವಾ)(ವಾನರರೂಪಿಗಳಾಗಿ) ಭೂಮೌ(ಭೂಮಿಯಲ್ಲಿ) ಜಾಯೇರನ್ (ಹುಟ್ಟಲಿ)
ಭಾವಾರ್ಥ: ರಾವಣನ ಸಂಹಾರದಲ್ಲಿ ನನಗೆ ನಿಮ್ಮೆಲ್ಲರ ನೆರವಿರಲಿ. ಅದಕ್ಕಾಗಿ ದೇವತಗಳೆಲ್ಲರೂ ತಮ್ಮ ತಮ್ಮ ಒಂದಂಶದಿಂದ ಕಪಿಗಳ ರೂಪದಲ್ಲಿ ಭೂಮಿಯಲ್ಲಿ ಜನಿಸಲಿ.
ಏವಮುಕ್ತ್ವಾ ವಿಧಾತಾರಂ ತತ್ರೈವಾಂತರ್ದಧೇ ಪ್ರಭುಃ। ಪದ್ಮಯೋನಿಸ್ತು ಗೀರ್ವಾಣೈಃ ಸಮಂ ಪ್ರಾಯಾತ್ಪ್ರಹರ್ಷಧೀಃ॥೧।೧೮॥
ಪದಚ್ಛೇದ:
ಏವಂ ಉಕ್ತ್ವಾ ವಿಧಾತಾರಂ ತತ್ರ ಏವ ಅಂತರ್ದಧೇ ಪ್ರಭುಃ। ಪದ್ಮಯೋನಿಃ ತು ಗೀರ್ವಾಣೈಃ ಸಮಂ ಪ್ರಾಯಾತ್ ಪ್ರಹರ್ಷಧೀಃ॥
ವಿಧಾತಾರಂ(ಬ್ರಹ್ಮದೇವನನ್ನು ಕುರಿತು) ಏವಂ (ಹೀಗೆ) ಉಕ್ತ್ವಾ (ಹೇಳಿ) ಪ್ರಭುಃ(ಭಗವಂತನು) ತತ್ರ ಏವ (ಅಲ್ಲಿಯೇ) ಅಂತರ್ದಧೇ (ಮಾಯವಾದನು) ಪದ್ಮಯೋನಿಃ(ಬ್ರಹ್ಮನು) ಪ್ರಹೃಷ್ಟಧೀಃ (ಸಂತುಷ್ಟನಾಗಿ) ಗೀರ್ವಾಣೈಃ ಸಮಂ (ದೇವತೆಗಳೊಂದಿಗೆ) ಪ್ರಾಯಾತ್(ಹೊರಟುಹೋದನು)
ಭಾವಾರ್ಥ:
ಈ ರೀತಿಯಲ್ಲಿ ಬ್ರಹ್ಮದೇವನಿಗೆ ಅಭಯವಚನಗಳನ್ನು ಹೇಳಿ ಅಲ್ಲಿಯೇ ಅಂತರ್ಧಾನನಾದನು. ಪದ್ಮಸಂಭವನು ಭಗವಂತನ ಭರವಸೆಯಿಂದ ಸಂತುಷ್ಟನಾಗಿ ದೇವತೆಗಳೊಂದಿಗೆ ಹೊರಟು ಹೋದನು.
ಅಜೀಜನತ್ತತಃ ಶಕ್ರೋ ವಾಲಿನಂ ನಾಮ ವಾನರಮ್ ।
ಸುಗ್ರೀವಮಪಿ ಮಾರ್ತಾಂಡೋ ಹನೂಮಂತಂ ಚ ಮಾರುತಃ॥೧।೧೯॥
ಪದಚ್ಛೇದ:
ಅಜೀಜನತ್ ತತಃ ಶಕ್ರಃ ವಾಲಿನಂ ನಾಮ ವಾನರಮ್। ಸುಗ್ರೀವಂ ಅಪಿ ಮಾರ್ತಾಂಡಃ ಹನೂಮಂತಂ ಚ ಮಾರುತಃ॥ ಅನ್ವಯ: ತತಃ (ನಂತರ) ಶಕ್ರಃ (ಇಂದ್ರನು) ವಾಲಿನಂ ನಾಮ ವಾನರಮ್ (ವಾಲೀ ಎಂಬ ವಾನರನನ್ನೂ) ಮಾರ್ತಾಂಡಃ(ಸೂರ್ಯನು) ಸುಗ್ರೀವಂ (ಸುಗ್ರೀವನನ್ನೂ) ಮಾರುತಃ ಚ (ವಾಯುವು) ಹನೂಮಂತಂ (ಹನೂಮಂತನನ್ನೂ) ಅಜೀಜನತ್ (ಸೃಜಿಸಿದನು)
ಭಾವಾರ್ಥ:
ಕ್ಷೀರಸಾಗರತಟದಿಂದ ಹಿಂದಿರುಗಿದ ದೇವತೆಗಳು ಮಹಾವಿಷ್ಣುವಿನ ಆದೇಶದಂತೆ ತಮ್ಮ ತಮ್ಮ ಅಂಶಗಳಿಂದ ಒಬ್ಬೊಬ್ಬ ವಾನರರಿಗೆ ಜನ್ಮನೀಡಿದರು. ಇಂದ್ರನಿಂದ ವಾಲಿ, ಸೂರ್ಯನಿಂದ ಸುಗ್ರೀವ, ವಾಯುವಿನಿಂದ ಹನೂಮಂತನೂ ಜನಿಸಿದರು.
ಪುರೈವ ಜನಯಾಮಾಸ ಜಾಂಬವಂತಂ ಚ ಪದ್ಮಜಃ।
ಏವಮನ್ಯೇ ಚ ವಿಬುಧಾಃ ಕಪೀನಜನಯನ್ಬಹೂನ್॥೧।೨೦॥
ಪದಚ್ಛೇದ:
ಪುರಾ ಏವ ಜನಯಾಮಾಸ ಜಾಂಬವಂತಂ ಚ ಪದ್ಮಜಃ । ಏವಮ್ ಅನ್ಯೇ ಚ ವಿಬುಧಾಃ ಕಪೀನ್ ಅಜನಯನ್ ಬಹೂನ್ ॥
ಅನ್ವಯ ಅರ್ಥ:
ಪದ್ಮಜಃ ಚ(ಬ್ರಹ್ಮನೂ) ಪುರಾ ಏವ (ಮೊದಲೇ) ಜಾಂಬವಂತಂ(ಜಾಂಬವಂತನನ್ನು) ಉಯನಯಾಮಾಸ(ಹುಟ್ಟಿಸಿದ್ದನು) ಏವಂ(ಹೀಗೆಯೇ) ಅನ್ಯೇ ಚ ವಿಬುಧಾಃ(ಇತರ ದೇವತೆಗಳೂ) ಬಹೂನ್ ಕಪೀನ್ (ಬಹಳಷ್ಟು ವಾನರರನ್ನು) ಅಜನಯನ್(ಹುಟ್ಟಿಸಿದರು)
ಭಾವಾರ್ಥ:
ಬ್ರಹ್ಮದೇವನು ಜಾಂಬವಂತನನ್ನು ಹಲವು ಕಾಲ ಮೊದಲೇ ಹುಟ್ಟಿಸಿದ್ದನು. ಅದೇ ರೀತಿಯಾಗಿ ಉಳಿದೆಲ್ಲಾ ದೇವತೆಗಳೂ ತಮ್ಮ ಅಂಶಗಳಿಂದ ಬೇರೆ ಬೇರೆ ವಾನರರನ್ನು ಸೃಷ್ಟಿ ಮಾಡಿದರು.
Comments
Post a Comment